Thursday, December 30, 2010

ಶ್ರೀ ಕರಿಕಾನ ಪರಮೇಶ್ವರಿ ಮಹಾತ್ಮೆ.


          ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಹಚ್ಚಹಸುರಾಗಿರುವ ಅರಣ್ಯ. ಅನೇಕ ಜಾತಿಯ ಸಸ್ಯ ಸಂಕುಲಗಳ ಆಗರ. ಸಾಧು ಹಾಗು ಕ್ರೂರ ಪ್ರಾಣಿಗಳ ಆಶ್ರಯ ತಾಣ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಕಂಗೊಳಿಸಿದರೂ ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಕಣ್ಣಾರೆ ನೋಡಿದವರೇ ಭಾಗ್ಯವಂತರು. ಅಲ್ಲಿಯ ಆ ಸೌಂದರ್ಯ ರಾಶಿ ಹೇಳಲಸಾಧ್ಯವಾದುದು. ಮಳೆಗಾಲದ ಆ ತಂಪನೆಯ ವಾತಾವರಣ, ಸುತ್ತಲೂ ಚಪ್ಪರದಂತೆ ಕಾಣುವ ದಟ್ಟನೆಯ ಮಂಜು, ಚಳಿಗಾಲದ ಆ ಮೈಕೊರೆಯುವ ಚಳಿ ಇವೆಲ್ಲ ವರ್ಣನೆಗೆ ನಿಲುಕದ್ದಾಗಿದೆ.





          ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಹೊನ್ನಾವರ ತಾಲೂಕಿನ ನೀಲಕೋಡು ಗ್ರಾಮದ ಸುತ್ತಲೂ ಹಬ್ಬಿರುವ ಅರಣ್ಯ ಪ್ರದೇಶ ಐತಿಹಾಸಿಕವಾಗಿ, ಧಾರ್ಮಿಕವಾಗಿ ಅತ್ಯಂತ ಪ್ರಸಿದ್ಧವಾದ ಪ್ರದೇಶ. ಶತಮಾನಕ್ಕೂ ಹಿಂದೆ ಕೇವಲ ಅರಣ್ಯ ಸಂಪತ್ತೊಂದರಿಂದಲೇ ಪರಿಚಿತವಾಗಿದ್ದ ಈ ಪ್ರದೇಶವನ್ನು ಜನರು ದೂರದಿಂದಲೇ ಅದರ ಸೌಂದರ್ಯವನ್ನು ಸವಿಯುತ್ತಿದ್ದರು. ಸುಮಾರು ಅರ್ಧ ಶತಮಾನಗಳಿಂದೀಚೆ ಈ ಪ್ರದೇಶ ಧಾರ್ಮಿಕವಾಗಿ ಅತ್ಯಂತ ಜನಪ್ರಿಯವಾಗಿದೆ. ಇದು ಅನೇಕ ಔಷಧೀಯ ಸಸ್ಯಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ. ಅಪಾರ ಅರಣ್ಯ ಸಂಪತ್ತಿನಿಂದಾಗಿ ಸುತ್ತಮುತ್ತಲಿನ ಪ್ರದೇಶ ಸದಾ ಹಚ್ಚ ಹಸುರಿನಿಂದ ಕಂಗೊಳಿಸುತ್ತಿತ್ತು. ನವಿಲು, ಗಿಳಿ, ಪಾರಿವಾಳ, ಕೋಗಿಲೆ, ಜಿಂಕೆ ಮೊದಲಾದ ಸಾಧು ಪ್ರಾಣಿಗಳಲ್ಲದೇ ಹುಲಿ, ಚಿರತೆ ಮೊದಲಾದ ಕ್ರೂರಪ್ರಾಣಿಗಳೂ ಇಲ್ಲಿ ವಾಸಿಸುತ್ತಿವೆ.

          ಉತ್ತರ ಕನ್ನಡ ಜಿಲ್ಲೆಯು ಪ್ರವಾಸೀ ಕೇಂದ್ರಗಳ ನಾಡು. ಕೇವಲ ಪ್ರಕೃತಿಯ ವಿಸ್ಮಯಗಳಲ್ಲದೇ ಅನೇಕ ಧಾರ್ಮಿಕ ಕ್ಷೇತ್ರಗಳ ನೆಲೆವೀಡು. ನಯನ ಮನೋಹರವಾದ ಜಲಧಾರೆಗಳಿಂದ ಧುಮ್ಮಿಕ್ಕುವ ಜಗದ್ವಿಖ್ಯಾತ ಜೋಗಜಲಪಾತ; ವಿಶಾಲವಾದ ಸಮುದ್ರತೀರದ ರಮಣೀಯ ಸೌಂದರ್ಯ; ಯಾಲ್ಲಾಪುರದ ಮಾಗೋಡು ಜಲಪಾತ; ಆದಿಪೂಜಕ ಗಣೇಶನ ಪುಣ್ಯಕ್ಷೇತ್ರ ಇಡಗುಂಜಿ; ಸಮುದ್ರದ ತಟದಲ್ಲಿ ಗಗನಚುಂಬಿ ಗೋಪುರದಿಂದ ಪ್ರಸಿದ್ದವಾದ ಮಹೇಶ್ವರನ ಪುಣ್ಯಕ್ಷೇತ್ರ ಮುರ್ಡೇಶ್ವರ; ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ಗೋಕರ್ಣ; ನಿಸರ್ಗ ಮಧ್ಯದಲ್ಲಿ ಆಗಸದೆತ್ತರಕ್ಕೆ ಬೆಳೆದುನಿಂತು, ಶಿಲೆಗಳಿಂದ ಕೂಡಿದ ಶಿಖರಳಿಂದಲೇ ಖ್ಯಾತಿಯಾದ ಯಾಣ; ಶಿರಸಿಯ ಮಾರಿಕಾಂಬೆ, ಇವುಗಳ ಜೊತೆಗೆ ನಿಸರ್ಗಮಧ್ಯದಲ್ಲಿರುವ ಧಾರ್ಮಿಕ ಕ್ಷೇತ್ರ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯವೂ ಒಂದು.

          ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಕಂಗೊಳಿಸುವ ನಯನಮನೋಹರವಾದ ಸೌಂದರ್ಯರಾಶಿಯ ಮಧ್ಯೆ ಸುತ್ತಲಿನ ಪಂಚ ಗ್ರಾಮದೇವತೆಯಾಗಿ ನೆಲೆನಿಂತವಳು ಶ್ರೀ ಕರಿಕಾನ ಪರಮೇಶ್ವರಿ. ಗ್ರಾಮದಿಂದ ೫ ಕಿ.ಮೀ. ದೂರದಲ್ಲಿ ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಪುಣ್ಯಕ್ಷೇತ್ರವಾಗಿ, ನಿಸರ್ಗಧಾಮವಾಗಿ ಪ್ರಸಿದ್ದಿಯಾದ ಶಾಂತಿಧಾಮ. ಈ ಕ್ಷೇತ್ರದಲ್ಲಿ ನಿಂತು ಒಮ್ಮೆ ನೋಡಿದಾಗ ಸುತ್ತಲೂ ಕಂಗೊಳಿಸುವ ಪ್ರಕೃತಿಯ ಸೌಂದರ್ಯರಾಶಿ, ಅರಬ್ಬೀ ಸಮುದ್ರದ ಅಲೆಗಳು ಮತ್ತು ಶರಾವತಿ ನದಿ ಹಾಗು ಅದರ ತಪ್ಪಲಿನ ದ್ವೀಪಗಳ ವಿಹಂಗಮ ನೋಟ, ಪ್ರಕೃತಿಯ ಮಧ್ಯದಲ್ಲಿ ಹಸಿರಾಗಿ ಕಾಣುವ ಅಡಿಕೆ, ತೆಂಗು, ಭತ್ತದರಾಶಿ ನೋಡುಗನ ಮೈ ಪುಳಕಗೊಳ್ಳುವಂತೆ ಮಾಡುತ್ತದೆ.

          ಈ ಕ್ಷೇತ್ರವು ಕೇವಲ ಶಿಲೆಗಳಿಂದಾವ್ರತವಾದ ಶಿಖರಗಳ ನಡುವೆ ಇದ್ದು, ಶ್ರೀ ಕರಿಕಾನಮ್ಮ ಶಿಲಾಮಯವಾದ ಉದ್ಭವ ಮೂರ್ತಿಯಾಗಿದೆ. ಈ ಕ್ಷೇತ್ರ ಶ್ರೀ ಶ್ರೀಧರರ ತಪೋಭೂಮಿಯಾಗಿದ್ದು, ಅವರ ಪ್ರೇರಣೆ ಹಾಗು ಸಂಕಲ್ಪದಿಂದಲೇ ಇಲ್ಲಿ ದೇವಾಲಯವು ನಿರ್ಮಾಣಗೊಂಡಿದೆ. ಇಲ್ಲಿಂದ ಅನತಿ ದೂರದಲ್ಲಿ ವಂದಡಿಕೆ ಶಂಭುಲಿಂಗನ ದೇವಾಲಯವಿದ್ದು ಅಲ್ಲಿ ಸದಾ ಕಾಲ ಶಿವಲಿಂಗದ ಮೇಲೆ ನೀರು ಬೀಳುತ್ತಿರುವುದು ಇಲ್ಲಿಯ ವಿಶೇಷ. ಸಕಲೈಶ್ವರ್ಯ ಸರ್ವಶಕ್ತಿ ಸಂಪನ್ನೆಯೂ, ಜಗನ್ಮಾತೆಯೂ, ಆದಿಶಕ್ತಿ ಸ್ವರೂಪಿಣಿಯೂ, ಜಗದ್ಧಾತ್ರಿಯೂ, ಸಕಲ ಲೋಕ ಕಲ್ಯಾಣ ಕಾರಿಣಿಯೂ, ಲೋಕಪಾವನೆಯೂ ಆದ ಶ್ರೀ ಕರಿಕಾನ ಪರಮೇಶ್ವರಿಯು ಭಕ್ತರ ಸಂಕಷ್ಟಹಾರಿಣಿಯಾಗಿ ನೆಲೆನಿಂತಿದ್ದಾಳೆ.

ಕ್ಷೇತ್ರದ ಮಹಾತ್ಮೆ :

          ಬಸವರಾಜ ದುರ್ಗವು ಶ್ರೀ ಮಾತೆಯ ಉಗಮಸ್ಥಾನವೆಂದು ಹೇಳಲಾಗಿದೆ. ದಕ್ಷಿಣಾಪಥದಲ್ಲಿ ರಾಕ್ಷಸರ ದೌರ್ಜನ್ಯದಿಂದಾಗಿ ದೇವಾನು ದೇವತೆಗಳ ಮಂದಿರವೂ, ಪರಮಪೂಜ್ಯವಾದ ವೈದಿಕ ಧರ್ಮವೂ ಹೀನಾವಸ್ಥೆಗಿಳಿದ ಸಂಧರ್ಭದಲ್ಲಿ, ಅರಿಕೇಸರಿ ಬಸವರಾಜನು ತನ್ನ ಇಷ್ಟದೇವತೆಯಾದ ಶ್ರೀ ಮೂಕಾಂಬಿಕೆಯ ಪ್ರತಿಷ್ಟಾಪನೆಯನ್ನು ಮಾಡಿಸಿ ದೇವಿಯ ನಿತ್ಯನೈಮಿತ್ತಿಕ ಆರಾಧನೆಗಳು ಸುಸೂತ್ರವಾಗಿ ನಡೆಯುವಂತೆ ಮಾಡಿದನು. ಇವನ ಮರಣದ ನಂತರ ಅವನ ಸಂತತಿಯವರು ದಾಯಾದಿಮತ್ಸರಕ್ಕೊಳಗಾಗಿ ತಮ್ಮ ತಮ್ಮೊಳಗೇ ಬಡಿದಾಡಿದರಲ್ಲದೇ ತಮ್ಮ ತಾಯ್ನಾಡನ್ನೇ ಒತ್ತೆಯಿಟ್ಟರು. ಇದನ್ನು ಸಹಿಸದ ದೇವಿಯು  " ದುಷ್ಟಂ ದೂರೇ ವರ್ಜಯೇತ್ " ಎಂಬಂತೆ, ಪರಮೇಶ್ವರನ ಆವಾಸಸ್ಥಾನವೂ ಆದ ಸಹ್ಯಾದ್ರಿಗೆ ಅಭಿಮುಖವಾಗಿ ಹೊರಟಳು.

          ಶಾಪಗ್ರಸ್ಥರಾದ ಯಕ್ಷಸಹೋದರರು, ಭಂಡಾಸುರ ಮತ್ತು ಮಲ್ಲಾಸುರ ಎಂಬ ರಾಕ್ಷಸರಾಗಿ, ಪರಶುರಾಮ ಕ್ಷೇತ್ರದ ಸಜ್ಜನರನ್ನೂ, ಬ್ರಾಹ್ಮಣರನ್ನೂ ಹಿಂಸಿಸತೊಡಗಿದರು. ಜನರು ಸಂಘಟಿತರಾಗಿ ಈ ದುಷ್ಟದ್ವಯರನ್ನು ಎದುರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ ದಾನವರ ಮುಂದೆ ಮನುಷ್ಯ ಮಾತ್ರರಾದ ಇವರ ಆಟವೇನೂ ನಡೆಯದೇ ದೀನರಾಗಿ ದೈವದ ಮೊರೆ ಹೋಗಬೇಕಾಯಿತು. ಅದೇ ಸಮಯಕ್ಕೆ ಶ್ರೀ ದೇವಿಯು ಇತ್ತ ಬರಲು, ಈ ಅಲೌಕಿಕ ಸೌಂದರ್ಯದ ಮಾಯೆಗೊಳಗಾಗಿ ಮಾಲ್ಲಾಸುರ, ಭಂಡಾಸುರರು ತಮ್ಮ ರಾಕ್ಷಸ ಸ್ವಭಾವಕ್ಕನುಗುಣವಾಗಿ ವರ್ತಿಸಿದರು. ಆಗ ಶ್ರೀ ದೇವಿಯು ಮಲ್ಲಾಸುರನೊಡನೆ ಚಂಡಿಯಾಗಿ, ದುರ್ಗೆಯಾಗಿ ಸೆಣಸಾಡಿ ಮಲ್ಲಾಸುರನ ಶಿರಚ್ಛೇದನ ಮಾಡಿದಳು. ಈ ಮಲ್ಲಾಸುರನು ಮಡಿದ ಸ್ಥಳವೇ ಮುಂದೆ "ಮಲ್ಲಾರಮಕ್ಕಿ" ಎಂದು ಹೆಸರಾಯಿತು. ತಮ್ಮನ ಮರಣದಿಂದ ಕೋಪೋದ್ರಿಕ್ತನಾದ ಭಂಡಾಸುರನು ದೇವಿಯನ್ನು ನಾಶಮಾಡುವ ನಿರರ್ಥಕ ಪ್ರಯತ್ನ ಮಾಡಿದನು. ಇದನ್ನರಿತ ದೇವಿಯು ತನ್ನ ವಾಹನವಾದ ವ್ಯಾಘ್ರವನ್ನೇರಿ ದೈತ್ಯನೊಡನೆ ಅಖಂಡ ಇಪ್ಪತ್ತೊಂದು ದಿನಗಳ ವರೆಗೆ ಹೋರಾಡಿ ಕೊನೆಗೆ ಶಕ್ತ್ಯಾಯುಧದಿಂದ ಅವನ ಉದರವನ್ನೇ ಭಂಗಿಸಿದಳು. ಕೊನೆಗೆ ದಿವ್ಯ ದೇಹಧಾರಿಗಳಾದ ಯಕ್ಷಸಹೋದರರು ಶಾಪವಿಮುಕ್ತರಾಗಿ ದೇವಿಗೆ ಸಾಷ್ಟಾಂಗವಾಗಿ ನಮಿಸಿ, ಅಷೋತ್ತರ ಸ್ತೋತ್ರಗಳಿಂದ ದೇವಿಯ ಸ್ತೋತ್ರ ಮಾಡುತ್ತ, ಪಾರಾಯಣಗಳಿಂದಲೂ, ಸಪ್ತಶತಿಗಳಿಂದಲೂ ಪೂಜಿಸಿ ಅವಳ ಆಶೀರ್ವಾದದೊಡನೆ ತಮ್ಮ ಮೂಲನೆಲೆಯಾದ ಯಕ್ಷಲೋಕಕ್ಕೆ ಹೋದರು. ಈ ಭಂಡಾಸುರ  ಮಡಿದ ಭೂಮಿಯಾದ "ಭಂಡಾರಮಕ್ಕಿ" ಯಲ್ಲಿ ಶ್ರೀ ದೇವಿಯು, ಭಕ್ತರ ಇಚ್ಛೆಯಂತೆ ಕೆಲ ಕಾಲ ಅಲ್ಲಿಯೇ ನೆಲೆ ನಿಂತಳು.

          ಶ್ರೀ ದೇವಿಯು ರಾಕ್ಷಸರನ್ನು ಸಂಹರಿಸಿ, ಭಕ್ತರ ಅಭೀಷ್ಟವನ್ನು ಪೂರೈಸುತ್ತಿರುವುದು ಭರತ ಖಂಡದಲ್ಲೆಲ್ಲಾ ಪಸರಿಸಿತು. ಇದರಿಂದ ಅನೇಕ ಭಕ್ತರು ಭಂಡಾರಮಕ್ಕಿಗೆ ದೇವಿಯ ದರ್ಶನಕ್ಕಾಗಿ ಬರಲು, ಜನರ ಒತ್ತಡದೊಂದಿಗೆ ಭಂಡಾರಮಕ್ಕಿಯಲ್ಲಿ ಮಾಲಿನ್ಯವು ಬೆಳೆಯತೊಡಗಿತು. ಇದರಿಂದ ಬೇಸತ್ತ ಶ್ರೀ ದೇವಿಯು ಪವಿತ್ರವೂ, ಪ್ರಶಾಂತವೂ, ಜನಸಂಪರ್ಕದಿಂದ ದೂರವೂ ಇರುವ ಯಾವುದಾದರೊಂದು ನೈಸರ್ಗಿಕ ಪ್ರಕೃತಿರಮ್ಯ ಕ್ಷೇತ್ರದಲ್ಲಿ ಶಾಶ್ವತವಾಗಿ ನೆಲೆನಿಲ್ಲುವ ಸಂಕಲ್ಪ ಮಾಡಿದಳು. ಅಲ್ಲದೇ ಭಂಡಾರಮಕ್ಕಿಗೆ ಅನತಿ ದೂರದಲ್ಲಿಯೇ ಸಹ್ಯಾದ್ರಿಯು ಹಬ್ಬಿದ್ದು ಅದು ಅನೇಕ ಋಷಿಮುನಿಗಳಿಗೂ ಸಿದ್ಧಸಾಧಕರಿಗೂ ನೆಲೆವೀಡಾಗಿದೆ. ಅಂತಹುದೆ ಒಂದು ಸುಂದರ ತಾಣದಲ್ಲಿ ಪರಮೇಶ್ವರನು ಉದ್ಭವಿಸಿ "ವಂಡಡಿಕೆ" ಕ್ಷೇತ್ರವೆಂದು ಹೆಸರಾಗಿದ್ದು, ಅದು ನಿಬಿಡಾರಣ್ಯದಲ್ಲಿರುವುದರಿಂದ ಶ್ರೀ ದೇವಿಯು ಅಲ್ಲಿಯೇ ಸಮೀಪ ನೆಲೆನಿಲ್ಲಲು ತನ್ನ ಇಚ್ಛಾಮಾತ್ರದಿಂದ ನಿರ್ಣಯಿಸಿದಳು. ತಾನು ಭಂಡಾರಮಕ್ಕಿಯಿಂದ ನಿರ್ಗಮಿಸುವ ಸಂಗತಿ ಜನರಿಗೆ ತಿಳಿಯುವಂತೆ ಮಾಡಲು, ಸಮೀಪದ ನೀಲಕೋಡ ಗ್ರಾಮದ "ಗುಬ್ಬೀ" ಮನೆಯ ಒಬ್ಬರಿಗೆ ರಾತ್ರಿ ಸ್ವಪ್ನದಲ್ಲಿ ಕಾಣಿಸಿಕೊಂಡಳಲ್ಲದೇ, ತಾನು ಇಲ್ಲಿಂದ ಪವಿತ್ರವಾದ ಸಹ್ಯಾದ್ರಿ ಪರ್ವತಾವಳಿಯಲ್ಲಿ ನೆಲೆಸುವುದಾಗಿಯೂ ನಿನಗೆ ನನ್ನನ್ನು ಆರಾಧಿಸುವ ಇಚ್ಛೆಯುಂಟಾದಲ್ಲಿ ನನ್ನ ನೆಲೆಯನ್ನು ಶೋಧಿಸಿ ಅರ್ಚಿಸಬಹುದೆಂದೂ ಹೇಳಿದಳಂತೆ. ಈ ರೀತಿ ಮೇಲಿಂದ ಮೇಲೆ ಅವನಿಗೆ ಕನಸಿನಲ್ಲಿ ದೇವಿ ಬಂದು ಹೇಳಿದಂತಾಗುತ್ತಿತ್ತು. ಇದಾದ ಕೆಲವೇ ದಿನಗಳಲ್ಲಿ ಇನ್ನೊಂದು ವಿಚಿತ್ರ ಘಟನೆ ಅವನ ಅರಿವಿಗೆ ಬಂದಿತು. ಅವರ ಮನೆಯಲ್ಲಿ ಬಹಳ ಸಭ್ಯವಾದ ಒಂದು ಕೌಲೆ ಹೆಸರಿನ ಆಕಳು ಇದ್ದು, ಅದು ಯಾವಾಗಲೂ ಮನೆಯ ಆಸುಪಾಸಿನಲ್ಲೇ ಮೇಯುತ್ತಿತ್ತು. ಅವನಿಗೆ ಸ್ವಪ್ನ ದೃಷ್ಟಾಂತ ಪ್ರಾರಂಭವಾದೊಡನೆಯೇ ಆ ಆಕಳಿನ ನಡತೆಯಲ್ಲಿ ವಿಶೇಷ ಬದಲಾವಣೆಗಳು ಕಂಡುಬಂದವು. ಬೆಳಿಗ್ಗೆ ಕೊಟ್ಟಿಗೆಯಿಂದ ಬಿಟ್ಟೊಡನೆಯೇ  ಅದು ಹಿಂದು ಮುಂದು ನೋಡದೆ ತಲೆ ಬಗ್ಗಿಸಿ ಕಾಡಿನ ದಾರಿ ಹಿಡಿಯ ತೊಡಗಿತು. ಸಂಜೆ ಮರಳುವಾಗ ಅದರ ಕೆಚ್ಚಲು ಬರಿದಾಗಿರುತ್ತಿತ್ತು. ಆಕಳಿಗೆ ಯಾವುದೇ ರೋಗ ಬಾಧೆಯಾಗಲೀ, ತೊಂದರೆಯಾಗಲೀ ಇರಲಿಲ್ಲ. ಅಲ್ಲದೆ ಅದರ ಗುಣ ಸ್ವಭಾವದಲ್ಲೂ ಯಾವುದೇ ಬದಲಾವಣೆಯಾಗಿರಲಿಲ್ಲ. ಆದರೆ ಕರುವಿಗಾಗಲೀ ಮನುಷ್ಯರಿಗಾಗಲೀ ಅದರ ಕೆಚ್ಚಲಿನಲ್ಲಿ ಹಾಲು ಮಾತ್ರ ಇರುತ್ತಿರಲಿಲ್ಲ. ಇದರಿಂದ ಮನೆಯವರಿಗೆ ಆಶ್ಚರ್ಯವಾಯಿತು. ಬಹುಶಃ ಅಡವಿಯಲ್ಲೇ ಅದಕ್ಕೆ ಏನಾದರೂ ತೊಂದರೆಯಾಗುತ್ತಿರಬಹುದೆಂದು ಮರುದಿನ ಅಡವಿಗೆ ಹೋಗದಂತೆ ಅದನ್ನು ತಡೆದರು. ಆದರೆ ಅದನ್ನು ತಡೆಹಿಡಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಸಭ್ಯತೆಯ ಸಾಕಾರ ಮೂರ್ತಿಯಾದ ಆಕಳು ತನ್ನನ್ನು ಅಡವಿಗೆ ಹೋಗದಂತೆ ಪ್ರತಿರೋಧವುಂಟುಮಾಡಿದಾಗ ರಣಚಂಡಿಯಂತೆ ತನ್ನನ್ನು ತಡೆದವರನ್ನು ಬೀಳಿಸಿ ಅಡವಿಯ ಕಡೆಗೆ ಓಟಕಿತ್ತಿತು. ಮರುದಿನ ಅದಕ್ಕೆ ಅಡವಿಗೆ ಹೋಗಲು ಅವಕಾಶವಾಗದಂತೆ ಅದನ್ನು ಕೊಟ್ಟಿಗೆಯಲ್ಲೇ ಕಟ್ಟಿದಾಗ, ಕೆಲವು ಸಮಯದಲ್ಲೇ ಅದು ಯಾರೋ ಕರೆದುದನ್ನು ಆಲಿಸುವಂತೆ ಕಿವಿ ನಿಮಿರಿಸಿ ಅಡವಿಯ ಕಡೆಗೆ ನೋಡತೊಡಗಿತ್ತು. 'ಅಂಬಾ' ಎಂದು ಆರ್ತನಾದದಿಂದ ಕೂಗುವುದು, ಮುಂಗಾಲಿನಿಂದ ನೆಲ ಕೆದರುತ್ತ ಹೋಗುವಂತೆ ನಟಿಸತೊಡಗಿತ್ತು. ಕ್ಷಣ ಕ್ಷಣಕ್ಕೂ ಅದರ ಆತುರ ಹೆಚ್ಚುತ್ತಹೋಯಿತು. ಕೊನೆಗೂ ಅದು ತನ್ನನ್ನು ಕಟ್ಟಿದ ಹಗ್ಗವನ್ನು ಕಿತ್ತುಕೊಂಡು ನಾಗಾಲೋಟದಿಂದ ಬೆಟ್ಟದ ಕಡೆಗೆ ಓಡತೊಡಗಿತು.ಇದರಿಂದ ಅವರ ಮನೆಯವರಿಗೆ ಅತ್ಯಂತ ಆಶ್ಚರ್ಯವಾಗಿ ಆಕಳ ಈ ರೀತಿಯ ವರ್ತನೆಗೆ ಕಾರಣ ತಿಳಿಯುವುದಕ್ಕಾಗಿ ಅದರ ಹಿಂದೆಯೇ ಹೋದರು. ಆಕಳು ಚಿರಪರಿಚಿತವಾದ ಹಾದಿಯಲ್ಲಿ ಹೋಗುವಂತೆ ಬೆಟ್ಟವನ್ನು ಹತ್ತಿ ಹೋಗಿ ಒಂದು ಸ್ಥಳದಲ್ಲಿ ನಿಂತಿತು. ಅದರ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಅದರ ಜೊತೆಗೆ ಅದರ ಕೆಚ್ಚಲುಗಳಿಂದ ಕ್ಷೀರಧಾರೆ ಸುರಿಯತೊಡಗಿತು. ಕೆಚ್ಚಲಿನಿಂದ ಸುರಿಯುವ ಹಾಲು ಒಂದು ಶಿಲಾಖಂಡದ ಮೇಲೆ ಬೀಳುತ್ತಿದ್ದರೂ, ಬಿದ್ದ ಸ್ಥಳದಲ್ಲಿ ಮಾತ್ರ ಒಂದು ತೊಟ್ಟು ಹಾಲೂ ಕಾಣುತ್ತಿರಲಿಲ್ಲ. ಶಿಲೆಯ ಮೇಲೆ ಬಿದ್ದ ಹಾಲು ಏನಾಗಿರಬಹುದೆಂದು ಅವರಿಗೆ ಅತ್ಯಂತ ಆಶ್ಚರ್ಯವಾಯಿತು. ಆಕಳಿಗೆ ಭೂತ ಬಾಧೆಯೇನಾದರೂ ಆಗಿರಬಹುದೋ ಎಂಬ ಅನುಮಾನವೂ ಉಂಟಾಯಿತು. ಆಕಳನ್ನು ಚೆನ್ನಾಗಿ ಥಳಿಸಿ ಬಲಾತ್ಕಾರದಿಂದ ಅದನ್ನು ಮನೆಗೆ ತಂದರು. ಅಂದೇ ರಾತ್ರಿ ಮನೆಯ ಯಜಮಾನನಿಗೆ ಪುನಃ ಕನಸಿನಲ್ಲಿ ದೇವಿಯು ಕಾಣಿಸಿಕೊಂಡಳು. ಆದರೆ ಈ ಸಲದ ಕನಸು ತುಂಬಾ ವಿಚಿತ್ರವಾಗಿತ್ತು. ಸದಾ ಹಸನ್ಮುಖಿಯಾಗಿದ್ದ ದೇವಿ ಕುಪಿತಳಾಗಿದ್ದಳು. ಅವಳ ಕಣ್ಣು ಕಿಡಿಕಾರುತ್ತಿತ್ತು. ಮೈತುಂಬ ಬಾಸುಂಡೆಗಳು ಎದ್ದಿದ್ದವು. ಮೊದಲು ಸಾಮಾನ್ಯ ಸ್ತ್ರೀಯಂತೆ ಕಾಣಿಸಿಕೊಂಡ ಮೂರ್ತಿ ಕ್ಷಣಾರ್ಧದಲ್ಲಿ ಅಷ್ಟ ಬಾಹುಗಳಿಂದ ಕಂಡುಬಂದಳು. ಯಜಮಾನನಿಗೆ ಹೆದರಿಕೆಯುಂಟಾಗಿ ಕನಸಿನಲ್ಲೇ ಅವಳಿಗೆ ನಮಸ್ಕರಿಸಿದನು. ತನ್ನನ್ನು ಅನುಗ್ರಹಿಸುವಂತೆ ಬೇಡಿಕೊಂಡನು. ಆಗ ದೇವಿಯು " ನಾನು ನಿನಗೆ ಪದೇ ಪದೇ ಕಾಣಿಸಿಕೊಂಡು ಸೂಚನೆ ಕೊಡುತ್ತಿದ್ದರೂ, ಅದನ್ನು ಅಲಕ್ಷಿಸಿ ನನ್ನ ಪ್ರತಿರೂಪದಂತಿರುವ ಕೌಲೆಯನ್ನು ( ಹಸುವಿನ ಹೆಸರು ) ಹಿಂಸಿಸಿ ಪರೋಕ್ಷವಾಗಿ ನನ್ನನ್ನೇ ಹಿಂಸೆಗೆ ಗುರಿಮಾಡಿರುವೆಯೆಂದು ಹೇಳಿದಂತಾಯಿತು. ಇಲ್ಲಿಯವರೆಗೆ ಅಜ್ಞಾನದಿಂದ ಆದ ತಪ್ಪನ್ನು ಕ್ಷಮಿಸುವದಾಗಿಯೂ ಇನ್ನು ಮುಂದೆ ಸಹ ಇದೇ ರೀತಿ ನೀನು ನಡೆದುಕೊಂಡಲ್ಲಿ ಸಹಿಸಲಾಗದೆಂದೂ ಹೇಳಿದಂತಾಯಿತು. ಆಗ ಯಜಮಾನನು ತಾಯೇ, ಅಜ್ಞಾನದ ನನ್ನ ಅಪರಾಧವನ್ನು ಕ್ಷಮಿಸಿ ನಾನು ಮುಂದೆ ಏನು ಮಾಡಬೇಕೆಂಬುದನ್ನು ಆಜ್ಞಾಪಿಸುವಂತೆ ಬೇಡಿಕೊಂಡಾಗ ದೇವಿಯು ನಾನು ಈ ಹಿಂದೆ ಸೂಚಿಸಿದಂತೆ ಭಂಡಾರಮಕ್ಕಿಯಿಂದ ನಿರ್ಗಮಿಸಿ, ನಿಮ್ಮ ಆಕಳು ಹಾಲು ಸುರಿಸಿದ ಸ್ಥಳದಲ್ಲಿ ಉದ್ಭೂತಳಾಗುವುದಾಗಿಯೂ ಅಲ್ಲಿ ನನಗೆ ಒಂದು ನೆಲೆಯನ್ನು ನಿರ್ಮಿಸಿ ನೀವೇ ಮೂಲಕಾರರಾಗಿದ್ದು ನನಗೆ ತ್ರಿಕಾಲ ಪೂಜೆ ನಡೆಯುವಂತೆ ಮಾಡಿದರೆ ತಾನು ಸುತ್ತಮುತ್ತಲಿನ ಭಕ್ತರ ಅಭೀಷ್ಟವನ್ನು ನೆರವೇರಿಸಿ ಅದೇ ಸ್ಥಳದಲ್ಲಿ ಶಾಶ್ವತವಾಗಿ ನೆಲೆಸುವೆನೆಂದು ಹೇಳಿದಂತಾಯಿತು. ಅವನು ಕಣ್ಣು ತೆರೆದಾಗ ದೇವಿಯ ಮೂರ್ತಿ ಎದುರಿನಿಂದ ಮಾಯವಾದರೂ ಕೂಡ ಅವಳು ಹೇಳಿದ ಪ್ರತಿಯೊಂದು ಮಾತು ಅವನ ಮನಃ ಪಟಲದಲ್ಲಿ ಒಡಮೂಡಿತ್ತು.

          ಈ ಎಲ್ಲ ವೃತ್ತಾಂತವನ್ನೂ ಆತ ತನ್ನ ಊರಿನ ಸಮಸ್ತ ಜನರಲ್ಲಿ ಹೇಳಿದನು. ಅಲ್ಲದೇ ತಮ್ಮ ಹಸುವಿನ ಸಂಗಡ ಅವರನ್ನು ಕರೆದುಕೊಂಡು ಬೆಟ್ಟವನ್ನೇರಿ ಹೋದನು. ಹಾಗೆಯೇ, ಆಕಳು ಎಂದಿನಂತೆ ಗೊತ್ತಾದ ಸ್ಥಳದಲ್ಲಿ ಹಾಲು ಸುರಿಸತೊಡಗಿತು. ಸಂಗಡ ಬಂದ ಜನರಿಗೆ ಈ ಪವಾಡವನ್ನು ನೋಡಿ ಅತ್ಯಂತ ಆಶ್ಚರ್ಯವಾಯಿತು. ಅವರು ಆ ಆಕಳಿಗೂ, ಆಕಳು ಹಾಲುಸುರಿಸಿದ ಆ ಶಿಲಾಖಂಡಕ್ಕೂ ಅನನ್ಯ ಭಕ್ತಿಯಿಂದ ನಮಸ್ಕಾರ ಮಾಡಿ ಆ ಸ್ಥಳದಲ್ಲಿ ಒಂದು ದೇವಾಲಯ ನಿರ್ಮಿಸುವ ಸಂಕಲ್ಪ ಮಾಡಿದರು.

                              ಸ್ವಯಮೇವ ಸಮುದ್ಭೂತಾ ದೇವೀ ಶಂಕರೀ ಕಾನನೇ |
                              ಉದಙ್ಮುಖೀ ವಿಭಾಸಿತ್ವಂ ಮಾಯಯಾ ತ್ರಿಗುಣಾತ್ಮನಾ ||


 ಶ್ರೀ ಕರಿಕಾನ ಪರಮೇಶ್ವರಿ 
 
 
          ಗಹನವಾದ ಅರಣ್ಯದ ಮಧ್ಯದಲ್ಲಿ ಗುಣತ್ರಯಾತೀತಳಾಗಿ ಉದ್ಭವಿಸಿ ಒಂದು ಪಾರ್ಶ್ವದಲ್ಲಿ ಪರಮೇಶ್ವರ ಇನ್ನೊಂದು ಪಾರ್ಶ್ವದಲ್ಲಿ ಭಗವತೀ ಆದಿಶಕ್ತಿಯಾಗಿ ಅವರಿಗೆ ಗೋಚರಿಸಿತು. ಬ್ರಹ್ಮ ವಿಷ್ಣು ಶಿವಾತ್ಮಕ ಶಕ್ತಿಯುತಳಾದ ದೇವಿಯನ್ನು ಅವರು ವಿವಿಧವಾಗಿ ಸ್ತುತಿಸಿ ದೇವಿಯ ಪೂಜೆ ಅಬಾಧಿತವಾಗಿ ನಡೆಯುವಂತೆ ಮಾಡಲು ನಿರ್ಧರಿಸಿದರು. ಅದರಂತೆ ಆ ಸ್ಥಳದಲ್ಲಿ ಕಲ್ಲಿನಿಂದಲೇ ಒಂದು ಗುಡಿಯನ್ನು ನಿರ್ಮಿಸಿ ವೇದಾಧ್ಯಯನ ಸಂಪನ್ನರೂ, ಸದ್ಧರ್ಮಿಗಳೂ, ಆದ ಬ್ರಾಹ್ಮಣರ ಮುಖೇನ ದೇವಿಯ ಪೂಜೆಯು ತ್ರಿಕಾಲದಲ್ಲೂ ನಡೆಯುವಂತೆ ವ್ಯವಸ್ಥೆ ಮಾಡಿದರು. ಇವಕ್ಕೆಲ್ಲ ಮೂಲ ಕಾರಣರಾದ ಗುಬ್ಬೀ ಮನೆತನದವರಿಗೆ ಸೀಮೆಯ ಸಮಸ್ತ ಜನರೂ,' ಮೂಲಕಾರರೆಂದು ' ಗೌರವಿಸಿದರು.

          ಮೊದಲು ಸೂಕ್ಷ್ಮರೂಪದಿಂದ ಕಂಡುಬಂದ ದೇವಿಯ ವಿಗ್ರಹ ಕ್ರಮೇಣ ಪೂರ್ಣವಾಗಿ ಬೆಳೆದು ನಿಂತಿತು. ನಿರ್ಜನ ಪ್ರದೇಶವಾದ ಆ ಸ್ಥಳದಲ್ಲಿ ಸತತವಾಗಿ ವೇದಘೋಷಗಳೂ, ಘಂಟಾನಾದವೂ ಮೊಳಗಹತ್ತಿತು. ಸುತ್ತಮುತ್ತಲಿನ ಪರಿಸರದಲ್ಲಿದ್ದ ಸಾಧು ಹಾಗು ಹಿಂಸಾ ಪಶುಗಳು ನಿರ್ಭೀತಿಯಿಂದ ಅಲ್ಲಲ್ಲಿ ಅಡ್ಡಾಡ್ಡುತ್ತಿದ್ದರೂ ಸಹ ಅವು ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ, ಆಗಾಗ ಅವು ದೇವಿಯ ಆಲಯದ ಮುಂದೆ ಸಹ ಕಂಡುಬರುತ್ತಿದ್ದವು. ಅವುಗಳ ವರ್ತನೆಯನ್ನು ನೋಡಿದರೆ ಅವು ಸಹ ದೇವಿಯನ್ನು ಆರಾಧಿಸುತ್ತಿರುವಂತೆ ಕಂಡು ಬರುತ್ತಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು, ದೇವಿಗೆ ದಿನಾಲೂ ಕ್ಷೀರಾಭಿಷೇಕ ನೈವೇದ್ಯ ಮುಂತಾದವುಗಳು ಸರಾಗವಾಗಿ ನಡೆಯಲೆಂಬ ಉದ್ದೇಷದಿಂದ ಆಕಳುಗಳನ್ನು ಹರಕೆ ಹೊತ್ತು  ದೇವಾಲಯಕ್ಕೆ ಕೊಡುವ ವಾಡಿಕೆ ಮಾಡಿಕೊಂಡರು. ಈ ರೀತಿ ದೇವಾಲಯಕ್ಕೆ ದತ್ತಿಯಾಗಿ ಬಂದ ಆಕಳು ಯಾವುದೇ ಕಾವಲು ಕಟ್ಟುಗಳಿಲ್ಲದೆ ಅಡವಿಯಲ್ಲಿ ಸ್ವೇಚ್ಛೆಯಾಗಿ ಮೆಂದು ಬರುತ್ತಿದ್ದವು. ಹಗಲಿರುಳೂ ಹುಲಿ ಚಿರತೆಯ ಘರ್ಜನೆ ಅಡವಿಯಲ್ಲಿ ಮಾರ್ದನಿಗೊಳ್ಳುತ್ತಿದ್ದರೂ ಸಹ ದೇವಾಲಯದ ದನಗಳಿಗೆ ಅವುಗಳಿಂದ ಯಾವುದೇ ತೊಂದರೆಯಾಗುತ್ತಿರಲಿಲ್ಲ. ದಿನ ಹೋದಂತೆ " ಶ್ರೀ ಕರಿಕಾನ ಪರಮೇಶ್ವರಿಯ " ಮಹಿಮೆ ಭರತ ಖಂಡಾದಲ್ಲೆಲ್ಲಾ ಹಬ್ಬಿತು. ಭಕ್ತರು ಅನೇಕ ಕಷ್ಟ ನಷ್ಟಗಳನ್ನು ಸಹಿಸಿ ದೂರ ದೂರದಿಂದ  ಬರತೋಡಗಿದರು. ಅನೇಕ ಮಂದಿ ಸಿದ್ಧ ಸಾಧಕರು, ತಪಸ್ವಿಗಳೂ ಬಂದು ಈ ದಿವ್ಯ ತಾಣದಲ್ಲಿ ತಪಸ್ಸು ಮಾಡ ತೊಡಗಿದರು. ಕ್ರೂರ ಮೃಗಗಳ ಆವಾಸವಾಗಿದ್ದ ಸ್ಥಳ, ದೇವಿಯ ಹಾಗು ಭಕ್ತರ ಮತ್ತು ಸಾಧು ಸಂತರ ಆವಾಸಸ್ಥಾನವಾಯಿತು. 

          ಕಾಲಕ್ರಮೇಣ ದೇವಾಲಯದ ಜೀರ್ಣೋದ್ಧಾರವು ನೆರವೇರಿತು. ದೇವಾಲಯದ ಗರ್ಭಗುಡಿಗೆ ಭಜಕರ ಸಹಾಯದಿಂದ ತಾಮ್ರದ ತಗಡಿನ ಹೊದಿಕೆ ಮಾಡಲಾಯಿತು. ಅಲ್ಲದೇ ಯಾತ್ರಾರ್ಥಿಗಳಿಗೆ ಬಂದು ಹೋಗಲು ಅನುಕೂಲವಾಗುವಂತೆ ಕಾಲು ದಾರಿಯೂ ರಚಿಸಲ್ಪಟ್ಟಿತು. ಇದರಿಂದ ಯಾತ್ರಿಕರ ಸಂಖ್ಯೆಯೂ ಹೆಚ್ಚಾಯಿತು. ಭಕ್ತರಿಗೆ ಶ್ರೀ ದೇವಿಯು ಚತುರ್ಭುಜಳಾಗಿಯೂ, ಅಷ್ಟಭುಜದ ದುರ್ಗೆಯಾಗಿಯೂ, ಪ್ರಳಯಾಂತಕ ಭೈರವಿಯಾಗಿಯೂ, ವೀಣಾ ಪಾಣಿ ಶಾರದೆಯಾಗಿಯೂ, ಅವರವರ ಭಾವನೆಯಂತೆ ಕಂಡು ಬಂದಳು. ದೇವಿಯ ಕೀರ್ತಿ ದಿಗಂತಗಳ ವರೆಗೆ ಹಬ್ಬಿತು.

          ಈ ಕ್ಷೇತ್ರದಲ್ಲಿ ಯತಿಗಳು, ಸಂನ್ಯಾಸಿಗಳು ಬಹಳ ವರ್ಷಗಳ ತನಕ ತಪಸ್ಸನ್ನಾಚರಿಸಿದ್ದಾರೆ. ಅಂಥಹವರಲ್ಲಿ ಶ್ರೀ ಶ್ರೀಧರ ಸ್ವಾಮಿಗಳು, ಶೀಗೇಹಳ್ಳಿಯ ಶ್ರೀ ಶಿವಾನಂದ ಸದ್ಗುರುಗಳು ಪ್ರಮುಖರು. ಅಲ್ಲದೇ ಆ ಸಮಯದಲ್ಲಿ ಅವರು ದೇವಸ್ಥಾನದ ಜೀರ್ಣೋದ್ಧಾರವನ್ನೂ ಮಾಡಿಸಿದ್ದಾರೆ. ಅಲ್ಲದೇ ಶ್ರೀ ಶ್ರೀಧರ ಸ್ವಾಮಿಯವರ ಸಂಕಲ್ಪದಿಂದಲೇ ದೇವಾಲಯವನ್ನು ಪುನಃ ನಿರ್ಮಿಸಲಾಯಿತು. ದೇವಾಲಯ ಕಟ್ಟಲು ಅಲ್ಲಿಯ ಶಿಲೆಗಳನ್ನು ಒಡೆದು ಜಾಗ ಮಾಡುವಂತಿಲ್ಲ. ಏಕೆಂದರೆ ಸುತ್ತಮುತ್ತಲಿನ ಶಿಲೆಯು ಒಡೆದಲ್ಲಿ ಅಲ್ಲಿಂದ ಚಿಲುಮೆಯಂತೆ ರಕ್ತವು ಚಿಮ್ಮುತ್ತದೆ. ಪೃಥ್ವಿಯ ಗರ್ಭದಲ್ಲಿ ಭಯಂಕರವಾದ ಶಬ್ದ ಕೇಳಿಸುತ್ತದೆ. ಇಲ್ಲಿಯ ಸುತ್ತಮುತ್ತಲಿನ ಸ್ಥಳಗಳೆಲ್ಲ ಶ್ರೀ ದೇವಿಯ ಅಂಗಾಂಗಗಳೇ ಆಗಿವೆ. ಆದುದರಿಂದ ದೇವಿಯ ಎಡಗಡೆಗೆ ಇರುವ ಪ್ರಪಾತವನ್ನೇ ಕಲ್ಲು, ಕಬ್ಬಿಣ, ಸಿಮೆಂಟುಗಳಿಂದ ಕಾಂಕ್ರೀಟು ಹಾಕಿ ತುಂಬಿ ಸಾಕಷ್ಟು ವಿಶಾಲವಾದ ಸ್ಥಳವನ್ನು ನಿರ್ಮಿಸಿದರು.

ದೇವಿಯ ಮಹಿಮೆ :

          ಒಂದು ದಿನ ಮುಂಜಾನೆ ಮೇಯಲು ಬಿಟ್ಟ ಗೋವುಗಳು ಸಂಜೆಯಾದರೂ ಮರಳಿ ಬರಲಿಲ್ಲ. ಅಲ್ಲಿಯ ಅರ್ಚಕರಿಗೆ ತುಂಬಾ ಕಳವಳವಾಯಿತು. ಆದರೆ ಆ ವೇಳೆಯಲ್ಲಿ ಗೋವುಗಳನ್ನು ಹುಡುಕಲು ಎಲ್ಲಿಗಂತ ಹೋಗುವುದು. ದೇವರಿಗೆ ಕ್ಷೀರಾರ್ಘ್ಯ ಕೊಡುವುದಕ್ಕೂ ತೊಂದರೆಯುಂಟಾಗುವಂತಹ ಪರಿಸ್ಥಿತಿಯುಂಟಾಯಿತು. ಅರ್ಚಕರು ಬೇರೆ ದಾರಿ ಕಾಣದೇ ದೇವಿಯ ಮೊರೆ ಹೊಕ್ಕು " ತಾಯೇ ಸರ್ವಕಾರಣಳಾದ ನೀನು ನಿಷ್ಪಾತ ಗೋವುಗಳನ್ನು ರಕ್ಷಿಸು " ಎಂದು ಬೇಡಿಕೊಂಡು ತನ್ನ ವಸತಿಗೆ ಬರುವಷ್ಟರಲ್ಲಿ ಗೋವುಗಳು ಬಂದು ಸದ್ದು ಮಾಡಲು, ಲಗು ಬಗೆಯಿಂದ ಗೋವುಗಳನ್ನು ಕೊಟ್ಟಿಗೆಯ ಗೂಟಕ್ಕೆ ಕಟ್ಟಿ ಪೂಜೆಯ ವೇಳೆಯಾದುದರಿಂದ ಒಂದೆರಡು ಗೋವುಗಳನ್ನು ಮಾತ್ರ ಕರೆದು ಸುಸೂತ್ರವಾಗಿ ದೇವರ ಪೂಜೆ ಮುಗಿಸಿದರಂತೆ. ಮುಂಜಾನೆ ಪ್ರಾತರ್ವಿಧಿಗಳನ್ನು ತೀರಿಸಿ ಗೋವುಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋದಾಗ ಒಂದು ಹೆಬ್ಬುಲಿ ( ದೊಡ್ಡ ಗಾತ್ರದ ಹುಲಿ ) ಗೂಟಕ್ಕೆ ಬಿಗಿಯಲ್ಪಟ್ಟಿತ್ತು. ಹುಲಿ, ಗೋವು ಮತ್ತು ಕರುಗಳ ನಡುವೆ ನಿಶ್ಚಿಂತೆಯಿಂದ ಮಲಗಿತ್ತು. ರಾತ್ರಿಯ ವೇಳೆ ಗೋವುಗಳೆಂದು ತಿಳಿದು ತಾನು ಹುಲಿಯನ್ನು ಕಟ್ಟಿಹಾಕಿದ್ದನ್ನು ನೆನೆದು  ಅರ್ಚಕರ ಶರೀರ ಕಂಪಿಸಿತು. ಕೊಟ್ಟಿಗೆಯಲ್ಲಿರುವ ಹುಲಿಯನ್ನು ಹೊರಹಾಕುವುದು ಹೇಗೆಂಬ ಚಿಂತೆಯುಂಟಾಯಿತು. ಆದರೆ ಅದನ್ನು ಹೊರಹಾಕದೇ ಬೇರೆ ವಿಧಿಯೇ ಇರಲಿಲ್ಲ. ಕೊನೆಗೆ ದೇವರ ಮೇಲೆ ಭಾರಹಾಕಿ ದೇವಿಯ ಸನ್ನಿಧಿಗೆ ಬಂದ ಅರ್ಚಕರು, ಭಕ್ತಿಯಿಂದ ಕೈಮುಗಿದು ದೇವರ ಪ್ರಸಾದ ತೀರ್ಥಗಳನ್ನು ಒಯ್ದು ದೂರದಿಂದ ಹುಲಿಯ ಮೇಲೆ ಹಾಕಿದರಂತೆ. ತೀರ್ಥಪ್ರಸಾದಗಳು ಸೋಂಕಿದೊಡನೆ ಹುಲಿ ವಿಧೇಯ ಮಕ್ಕಳಂತೆ ತಲೆ ಬಾಗಿ ನಿಂತುಕೊಂಡಿತಂತೆ. ಅರ್ಚಕರು ಅಂಜುತ್ತಾ ಅಂಜುತ್ತಾ ಹುಲಿಯ ಹತ್ತಿರ ಹೋದರೂ ಸಹ ಹುಲಿ ಮಾತ್ರ ನಿರ್ವಿಕಾರವಾಗಿ ಬೇರೆಕಡೆಗೆ ನೋಡುತ್ತಾ ನಿಂತುಕೊಂಡಿತಂತೆ. ಕೊನೆಗೆ ಧೈರ್ಯ ಮಾಡಿ ಹುಲಿಯ ಕೊರಳಿನ ಹಗ್ಗವನ್ನು ಕಳಚಿದೊಡನೆ ಹುಲಿ ಹೊರಬಂದು ದೇವಾಲಯದ ಕಡೆಗೆ ಕ್ಷಣಕಾಲದವರೆಗೆ ನೋಡಿ ಅಡವಿಯನ್ನು ಸೇರಿ ಮಾಯವಾಯಿತಂತೆ. ಅಂದಿನಿಂದಲೇ ದೇವಿಯ ಪರಿವಾರದಲ್ಲಿ ಹುಲಿಗೂ ಒಂದು ಸ್ಥಾನ ಸಿಗುವಂತಾಯಿತು. ದೇವಾಲಯದ ಮುಂದೆ " ಹುಲಿಯಪ್ಪನ " ಮೂರ್ತಿ ಸ್ಥಾಪಿಸಲ್ಪಟ್ಟು ಅದಕ್ಕೂ ಉತ್ಸವ ಮತ್ತು ಪೂಜೆಗಳು ದೊರೆಯುವಂತಾಯಿತು. ಅದರಂತೆ ಕ್ಷೇತ್ರರಕ್ಷಕನಾಗಿ ವೀರಭದ್ರನೂ, ಶೃಂಗಿ, ಭೃಂಗಿ ಮುಂತಾದ ಪ್ರಮಥಗಣಗಳೂ ವಾಸವಾದವು. ದೇವಿಯ ಮಂದಿರದ ಸುತ್ತಮುತ್ತ ಕಪ್ಪಾದ ಶಿಲೆಗಳೂ, ಹಚ್ಚಹಸುರಾಗಿ ಸದಾಕಾಲ ಶೋಭಿಸುತ್ತಿರುವ ಅರಣ್ಯ ರಾಶಿಗಳಿಂದ ಹಬ್ಬಿದ ದಟ್ಟ ನೆರಳು ಇವುಗಳಿಂದ ಶ್ರೀಮಾತೆಗೆ "ಕರಿಕಾನ ಪರಮೇಶ್ವರೀ" ಎಂಬ ಹೆಸರು ಶಾಶ್ವತವಾಯಿತು. ದೇವಿಯ ದರ್ಶನಕ್ಕಾಗಿ ದೇವತೆಗಳೂ, ಯಕ್ಷ, ಗಂಧರ್ವ, ಕಿಂಪುರುಷನಾಗಗಳೂ ಮೇಲಿಂದ ಮೇಲೆ ಬರುತ್ತಿದ್ದರೆಂದು ನಂಬಲಾಗುತ್ತದೆ. ದೇವಾಲಯದ ಸಮೀಪ ಒಂದು ನೀರಿನ ಕೊಳವಿದ್ದು, ಬೇಸಿಗೆಯ ಸುಡುಬಿಸಿಲಿನಲ್ಲೂ ಅಲ್ಲಿ ನೀರಿಗೆ ಕೊರತೆಯಾಗುವುದಿಲ್ಲ. ಸಹ್ಯಾದ್ರಿ ಪರ್ವತಗಳಿಂದ ಉದ್ಭೂತವಾಗುವ ನೀರು ಅನೇಕ ಔಷಧೀಯ ಗುಣಗಳನ್ನೂ ತನ್ನಲ್ಲಿ ಹೊಂದಿದೆ.

ಪೂಜಾ ವಿಧಾನಗಳು :

           ಶ್ರೀ ಕರಿಕಾನ ಪರಮೇಶ್ವರಿ ಕ್ಷೇತ್ರದಲ್ಲಿ ತ್ರಿಕಾಲ ಪೂಜೆಯು ಸತತವಾಗಿ ನಡೆಯುವುದು. ಪ್ರತಿದಿನ ಮಧ್ಯಾಹ್ನ ಅನ್ನದ ನೈವೇದ್ಯ ನಡೆಯುವುದು. ಶ್ರೀ ದೇವಿಗೆ ಪ್ರತಿದಿನ ಅನ್ನದ ನೈವೇದ್ಯ ಹಗಲಿನಲ್ಲಾದರೆ, ರಾತ್ರಿ ದೋಸೆ ಹಾಗು ಕಾಳುಮೆಣಸಿನ ಕಷಾಯ ( ಕಟ್ನೆ ) ನೈವೇದ್ಯ ನಡೆಯುವುದು. ಪ್ರತಿ ಮಂಗಳವಾರ-ಶುಕ್ರವಾರ ಉದ್ದಿನ ವಡೆ ನೈವೇದ್ಯ ನಡೆಯಬೇಕು. ಎಷ್ಟೋ ಮಂದಿ ಭಜಕರು ಸಹ ಹರಕೆ ಹೊತ್ತು ಉದ್ದಿನ ವಡೆ, ಸುಟ್ಟಾವು, ಪಾಯಸಗಳ ನೈವೇದ್ಯ ಮಾಡಿಸುವುದೂ ಉಂಟು. ತಮ್ಮ ಕಷ್ಟ ಪರಿಹಾರಾರ್ಥವಾಗಿ ಅನೇಕರು ಹರಕೆ ಹೊತ್ತು ಅದನ್ನು ಸಕಾಲಕ್ಕೆ ದೇವಿಗೊಪ್ಪಿಸಿ ಕೃತಾರ್ಥರಾಗುವರು. ಅಲ್ಲದೇ ಇದರ ಜೊತೆಗೆ ಪ್ರತಿದಿನ " ವಂದಡಿಕೆ " ಶಂಭುಲಿಂಗನ ಪೂಜೆಯನ್ನೂ ಇಲ್ಲಿಯ ಅರ್ಚಕರೇ ಮಾಡುತ್ತಾರೆ.

          ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ವಾರ್ಷಿಕವಾಗಿ ನಡೆಯುವ ಮುಖ್ಯ ಉತ್ಸವವೆಂದರೆ  ಶರನ್ನವರಾತ್ರಿ ಉತ್ಸವ. ಹತ್ತು ದಿನಗಳ ವರೆಗೆ ಅವ್ಯಾಹತವಾಗಿ ನಡೆಯವ ಉತ್ಸವದಲ್ಲಿ ಪುರೋಹಿತರೂ, ಮೂಲಕಾರರೂ, ಅರ್ಚಕರೂ ಅಲ್ಲದೇ ಸುತ್ತಮುತ್ತಲಿನ ಅನೇಕ ಮಂದಿ ವೈದಿಕೋತ್ತಮರೂ, ಭಕ್ತರೂ ಸೇರುತ್ತಾರೆ. ಕೊನೆಯ ದಿನ ಮಹಾಪೂಜೆಯೊಂದಿಗೆ ಅರ್ಚಕರು ಮೂಲಕಾರರು ಆದಿಯಾಗಿ ಎಷ್ಟೋ ಜನರಿಗೆ ದೇವಿಯ ಆವಾಹನೆಯಾಗಿ ಹೇಳಿಕೆ ಕೇಳಿಕೆಗಳು ನಡೆಯುತ್ತವೆ. ಅನ್ನ ಸಂತರ್ಪಣೆಯೂ, ಮುತ್ತೈದೆಯರ ಭೋಜನವೂ ನಡೆಯುವುದು. ಇಂಥ ಉತ್ಸವಗಳಲ್ಲಿ ಶ್ರೀದೇವಿಯ ಕೃಪೆಯಿಂದ ಇದುವರೆಗೆ ಯಾವುದೇ ರೀತಿ ಲೋಪದೋಷಗಳೂ ಉಂಟಾಗಿಲ್ಲ.

          ಮಕ್ಕಳಾಗದ ದಂಪತಿಗಳು  ಶ್ರೀದೇವಿಯಲ್ಲಿ ತೊಟ್ಟಿಲು ಬಟ್ಟಲು ಒಪ್ಪಿಸುವ ಹರಕೆ ಹೊತ್ತು ಸಂತಾನ ಭಾಗ್ಯ ಪಡೆದ ಎಷ್ಟೋ ಉದಾಹರಣೆಗಳಿವೆ. ಸಣ್ಣವರಿರುವಾಗ ಹೆಣ್ಣು ಮಕ್ಕಳು ಮೂಗು ಸುರಿದುಕೋಂಡಾಗ ತೊಂದರೆಯುಂಟಾದರೆ ಮೂಗುತಿಯ ಹರಕೆ ಹೊರುವರು ಹಾಗು ಮುತ್ತೈದೆ ಭಾಗ್ಯಕ್ಕಾಗಿಯೂ ಇದೇ ರೀತಿಯ ಹರಕೆ ಹೊತ್ತು ಮುಟ್ಟಿಸುವರು. ಕುಂಕುಮ, ಬಳೆ, ಸೀರೆ ಕುಪ್ಪುಸಗಳ ಹರಕೆ ಹೊರುವವರಿಗಂತೂ ಲೆಕ್ಕವೇ ಇಲ್ಲ. ಅರಿಶಿನ ಮುಂಡಿಗೆಯಂತ ಖಾಯಿಲೆ ಬಂದಾಗ ಅರಿಶಿನ ಮೂಟೆಯ ಹರಕೆ ಹೊರುವುದರಿಂದ ರೋಗ ವಾಸಿಯಾಗುವುದೆಂಬ ನಂಬಿಕೆಯಿದೆ. ಒಟ್ಟಿನಲ್ಲಿ ದೇವಿಯ ಸನ್ನಿಧಿಗೆ ಧನ ಕನಕಗಳ ಹರಕೆ ಹೊತ್ತು ಆರೋಗ್ಯ, ಮಾಂಗಲ್ಯ, ಪುತ್ರಲಾಭ, ಆಯುಷ್ಯ ಹಾಗು ಐಶ್ವರ್ಯ ಪಡೆಯಬಹುದೆಂಬ ಭಾವುಕತೆ ಭಜಕರಲ್ಲಿ ಮನೆಮಾಡಿದೆ.

          ಶ್ರೀ ದೇವಿಯ ಪೂಜೆಯಲ್ಲಿ ಯಾವುದೇ ಲೋಪದೋಷಗಳುಂಟಾಗದಿದ್ದರೂ, ಬಂದವರ ಅಜಾಗ್ರತೆಯಿಂದಾಗಲೀ ಅನಾಸಕ್ತಿ ಅಥವಾ ಅಹಂಕಾರದಿಂದಾಗಲೀ ಅಶುಚಿಯುಂಟಾದಾಗ ಇಲ್ಲಿ ಅನೇಕ ರೀತಿಯ ತೊಂದರೆಯುಂಟಾಗುವುದು. ದೇವಾಲಯದ ಹತ್ತಿರ ಹುಲಿ ಕಾಣಿಸಿಕೊಳ್ಳುವುದೂ, ರಾತ್ರಿ ವೇಳೆ ಭಯಂಕರ ಶಬ್ದವುಂಟಾಗುವುದೂ ಆಗುವುದು. ಈ ರೀತಿ ತಿಳಿದೂ ಅಶುಚಿಯಾಗುವಂತೆ ಮಾಡಿದವರಿಗೆ ಎಷ್ಟೋ ಕೆಡುಕಾದ ಉದಾಹರಣೆಗಳಿವೆ. ಎಷ್ಟೋ ಸಲ ವಿಧರ್ಮೀಯರಾದ ವಿದೇಶೀಯರು, ಅಮೇರಿಕಾ ಮುಂತಾದ ದೇಶದ ಪ್ರವಾಸಿಗರು ಬಂದರೂ ಸಹ ಅವರು ಕ್ಷೇತ್ರ ಮರ್ಯಾದೆಯನ್ನು ಮೀರದೇ ದೇವಿಯ ಸಂದರ್ಶನದಿಂದ ಸಂತುಷ್ಟರಾಗಿ ಹೋಗಿದ್ದಾರೆ. ಕಾಲ ಕ್ರಮೇಣ ಜನರಲ್ಲಿ ಈ ಕ್ಷೇತ್ರದ ಬಗ್ಗೆ ಹೆಚ್ಚಿನ ತಿಳುವಳಿಕೆಯುಂಟಾಯಿತು. ಬರಹೋಗುವವರ ಸಂಖ್ಯೆ ಹೆಚ್ಚಾಯಿತು.

          ಶ್ರೀ ದೇವಿಯ ಸನ್ನಿಧಿಯಲ್ಲಿ ಕೇವಲ ಪೂಜಾ ವಿಧಾನಗಳಲ್ಲದೇ ದೇವಿಯ ಪೂಜೆ ಉತ್ಸವಾದಿಗಳೂ ನಡೆಯುತ್ತದೆ. ಇದರ ಜೊತೆಯಲ್ಲಿ ಸನಾತನ ಧರ್ಮದ ವೃದ್ಧಿಯೂ, ವೇದ ಪಾಠಶಾಲೆಯಲ್ಲಿ ವಟುಗಳಿಗೆ ವಿದ್ಯಾದಾನವೂ ನಡೆಯುತ್ತಿದೆ.

ವಂದಡಿಕೆ ದೇವರು :

          ಶ್ರೀ ದೇವಿಯ ದೇವಸ್ಥಾನದಿಂದ ಅನತಿ ದೂರದಲ್ಲಿ ದುರ್ಗಮವಾದ ಬೆಟ್ಟದ ನಡುವೆ ಸಾಗಿದರೆ ಅಲ್ಲೊಂದು ದೇವಸ್ಥಾನವಿದೆ. ಅದು ಮಹೇಶ್ವರನ ಸನ್ನಿಧಿ. ಅದು ವಂದಡಿಕೆ ಕ್ಷೇತ್ರವೆಂದೇ ಪ್ರಸಿದ್ಧವಾಗಿದೆ. ಇದನ್ನು ವೃಂದಾರಕ ಕ್ಷೇತ್ರ ಎಂತಲೂ ಕರೆಯುವುದುಂಟು. ಈ ಕ್ಷೇತ್ರಕ್ಕೆ ಈ ಹೆಸರು ಬರಲು ಬೇರೆಯೇ ಕಾರಣವಿದೆ. ಅಲ್ಲಿ ಸದಾ ಕಾಲ ಒಂದು ಅಡಿಕೆ ಮರವು ಇರುವುದು ಬಹುದಿನಗಳಿಂದ ಅನುಭವಕ್ಕೆ ಬಂದಿರುತ್ತದೆ. ಅಲ್ಲಿನ ಒಂದು ಅಡಿಕೆ ಮರವು ನಾಶವಾಗುವುದರಲ್ಲಿ ಇನ್ನೊಂದು ಮರ ತಯಾರಾಗುವದೆಂದು ಪ್ರತೀತಿ ಇದೆ. ಅದಕ್ಕಾಗಿ ಈ ಸ್ಥಳವನ್ನು ವಂದಡಿಕೆ ಎಂದೇ ಕರೆಯುತ್ತಾರೆ. ಅಲ್ಲದೇ ಅಲ್ಲಿನ ಶಿವ ದೇವಾಲಯವು " ವಂದಡಿಕೆ ಶಂಭುಲಿಂಗ " ಎಂದೇ ಪ್ರಸಿದ್ಧಿಯಾಗಿದೆ. ಅಲ್ಲಿನ ಶಿವಲಿಂಗವು ನಿರಾವರಣವಾಗಿದ್ದು ಸದಾಕಾಲ ಲಿಂಗದ ಮೇಲೆ ಜಲಧಾರೆ ಸುರಿಯುತ್ತಿರುತ್ತದೆ. ನೋಡುವವರಿಗೆ ಶಿವನ ಶಿರೋಭಾಗದಲ್ಲಿ ಶೋಭಿಸುವ ಗಂಗಾಮಾತೆಯ ನೆನಪು ಬರುತ್ತದೆ. ಆ ಶಿವಲಿಂಗವು ಮೇಲ್ಭಾಗದಲ್ಲಿ ಒಂದು ಅಡಿಕೆಯಂತೆ ಚಿಕ್ಕದಾಗಿ ಕಂಡರೂ ಅದರ ಬುಡವು ಸಮಸ್ತ ಬ್ರಹ್ಮಾಂಡವನ್ನೇ ಆವರಿಸಿರುವದೆಂದು ಹೇಳುತ್ತಾರೆ. ಸುತ್ತಲೂ ಅತ್ಯಂತ ಮನೋಹರವಾದ ಕಾಡು ಪ್ರದೇಶ. ಕಾಡಿನಲ್ಲಿ ಹುಲಿ ಚಿರತೆಗಳಂತ ಕ್ರೂರ ಪ್ರಾಣಿಗಳೂ, ಚಿಗರೆ ಮೊಲದಂತ ಸಾಧುಪ್ರಾಣಿಗಳು ವಾಸವಾಗಿದ್ದರೂ ಸಹ ಅವು ಆ ಸ್ಥಳದ ಮಹಾತ್ಮೆಯಿಂದ ಪರಸ್ಪರ ಮೈತ್ರಿಯಿಂದ ಬಾಳುತ್ತಿವೆ. ದುರ್ಗಮವಾದ ನಿಬಿಡಾರಣ್ಯದ ಮಧ್ಯದಲ್ಲಿದ್ದರೂ ಕೂಡ ಕಣ್ಮನ ಸೆಳೆಯುವ ಪ್ರಕೃತಿಯನ್ನು ಅಲ್ಲಿ ನೋಡಬಹುದು. ಸುತ್ತಲೂ ಹಸಿರು ತುಂಬಿದ ಆ ಪ್ರದೇಶದಲ್ಲಿ ವಿಹರಿಸಿದರೆ ಮೈ ರೋಮಾಂಚನಗೊಳ್ಳುತ್ತದೆ. 

          ಪ್ರಕೃತಿರಮ್ಯವಾದ ಶ್ರೀ ಕರಿಕಾನ ಪರಮೇಶ್ವರೀ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿರುವುದರೊಂದಿಗೆ ನಮ್ಮ ರಾಜ್ಯದಲ್ಲಿಯೇ ಅತ್ಯಂತ ಪ್ರೇಕ್ಷಣೀಯ ಸ್ಥಳವೆಂದು ಹೇಳಬಹುದು. ಇದೊಂದು ಪ್ರವಾಸೀ ಕ್ಷೇತ್ರವಾಗಿ ಅನೇಕ ಜನ ರಸಿಕರಿಗೂ, ಭಕ್ತರಿಗೂ ಮನತಣಿಸುತ್ತಿದೆ. ಪವಿತ್ರವಾದ ಈ ಕ್ಷೇತ್ರ ಪರಿಶುದ್ಧವಾಗೇ ಇರಲಿ. ನಾಗರೀಕತೆಯ ಸೋಂಕು ಇದಕ್ಕೆ ತಗಲುವುದು ಬೇಡ. ಅಭಿವೃದ್ಧಿಯ ಹೆಸರಿನಲ್ಲಿ ಸಕಲ ಸೌಕರ್ಯಗಳನ್ನೂ ಕಲ್ಪಿಸಿಕೊಂಡು ಬರುವ ಪ್ರವಾಸಿಗರ ಮೋಜು-ಮಜಾಗಳ ನೆರಳೂ ಕೂಡ ಈ ಸ್ಥಳದಲ್ಲಿ ಬೀಳದಂತೆ ಎಚ್ಚರಿಕೆ ವಹಿಸೋಣ. ಶ್ರೀ ದೇವಿಯ ಕೃಪೆಯಿಂದ ಪ್ರಕೃತಿ ಸೌಂದರ್ಯದ ಖನಿಯಾದ ಈ ಪ್ರದೇಶ ಸದಾ ಹೀಗೆ ಕಣ್ಮನ ತಣಿಸುತ್ತ, ರಮ್ಯವಾಗಿ, ರಮಣೀಯವಾಗಿ ಕಂಗೊಳಿಸುತ್ತ ಇರಲಿ ಎಂದು ಹಾರೈಸೋಣ. ಸರ್ವಶಕ್ತಳಾದ ದೇವಿಯು, ಸಕಲ ಲೋಕ ಕಲ್ಯಾಣವಾಗುವಂತೆ ಪ್ರಸನ್ನ ವದನೆಯಾಗಿ ಸಮಸ್ತ ಭಕ್ತ ವೃಂದವನ್ನೂ ಆಶೀರ್ವದಿಸಲೆಂದು ಈ ಮೂಲಕ ಬೇಡಿಕೊಳ್ಳೋಣ.

                              ಶ್ರೀ ವೃಂದೇಶ್ವರ ಕ್ಷೇತ್ರಪಾಲ ಸಹಿತಾಂ ಶ್ರೀ ವೀರಭದ್ರಾನ್ವಿತಾಂ |
                              ಶ್ರೀ ವ್ಯಾಘ್ರೇಣ ವಿರಾಜಿತಾಂ ಭಗವತೀಂ ಶ್ಯಾಮಾಂ ಮನೋಹಾರಿಣೀಂ ||
                              ಶಾಂತಾಂ ಚಿಂತಿತದಾಯಿನೀಂ ಮುನಿನುತಾಂ ಮಂದಸ್ಮಿತಾಂ ಸುಂದರೀಂ |
                              ತಾಂ ದೇವೀಂ ಕರಿಕಾನ ಮಧ್ಯನಿಲಯಾಂ ವಂದೇ ಸುಭಾಗ್ಯಪ್ರದಾಂ ||


**************************

ವಿಳಾಸ :
 ಶ್ರೀ  ಕರಿಕಾನ  ಪರಮೇಶ್ವರಿ  ದೇವಾಲಯ
 ಪೊ : ನೀಲ್ಕೋಡು
 ತಾ : ಹೊನ್ನಾವರ
 ಉತ್ತರ ಕನ್ನಡ


Phone :
 08387 - 262123